ಪ್ರಶಸ್ತಿ ಮತ್ತು ಬಹುಮಾನಗಳು

ಪ್ರಶಸ್ತಿ :


1) ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ‘ಜಾನಪದ ತಜ್ಞ’ (1998)
2) ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (2006)


ನಾಲ್ಕು ಸಲ ಅಕಾಡೆಮಿ ಬಹುಮಾನ ಪಡೆದ ಲೇಖಕ
(ಮೂರು ಸಲ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಮತ್ತು ಒಂದು ಸಲ ಸಾಹಿತ್ಯ ಅಕಾಡೆಮಿಯಿಂದ)


ಬಹುಮಾನಿತ ಕೃತಿಗಳ ಪರಿಚಯ


1. ಗೊಂದಲಿಗರು : ಒಂದು ಅಧ್ಯಯನ (1982ರಲ್ಲಿ)


ದಕ್ಷಿಣ ಕರ್ನಾಟಕದಲ್ಲಿ ಕಂಡುಬರುವ ನೀಲಗಾರರು, ಕಂಸಾಳೆಯವರು, ಹೆಳವರು, ದೊಂಬಿದಾಸರು, ಮುಂತಾದ ವೃತ್ತಿಗಾಯಕರಿರುವಂತೆ, ಉತ್ತರ ಕರ್ನಾಟಕದಲ್ಲಿಯೂ ವೃತ್ತಿಗಾಯಕರಿದ್ದಾರೆ. ಮೂರು ಬಗೆಯ ವೃತ್ತಿಗಾಯಕರನ್ನು ಜಾನಪದ ಲೋಕಕ್ಕೆ ಕ್ಯಾತನಹಳ್ಳಿ ರಾಮಣ್ಣನವರು ಮೊದಲಸಲ ಪರಿಚಯಿಸಿದ್ದಾರೆ. ಅವರಲ್ಲಿ ಮೊದಲು ಪರಿಚಯಿಸಿದ್ದು ಗೊಂದಲಿಗರನ್ನು.


ಬೆಳಗಾವಿ ಜಿಲ್ಲೆಯ ವಿದ್ವಾಂಸರೊಬ್ಬರೊಡನೆ ನಡೆಸಿದ ವಿದ್ವತ್ ಯುದ್ಧದಲ್ಲಿ ಗೆಲುವು ಸಾಧಿಸಲು ನೆರವಾದ ಈ ಕೃತಿಯು ಗೊಂದಲಿಗರ ಬಗ್ಗೆ ನಡೆದಿರುವ ಮೊಟ್ಟಮೊದಲ ಅಧ್ಯಯನವಾಗಿದೆ.


ಈ ಅಧ್ಯಯನಕ್ಕೆ ಹಿನ್ನೆಲೆಯಾಗಿ 1972ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಕ್ಷೇತ್ರಕಾರ್ಯ ನಡೆಸಿ ಸಂಗ್ರಹಿಸಿದ ‘ಗೊಂದಲಿಗರ ಕಥೆಗಳು’ ಎಂಬ ಸಂಕಲನವೂ, 1975ರಲ್ಲಿ ಪ್ರಕಟವಾದ ‘ಶಿವಮೊಗ್ಗ ಜಿಲ್ಲೆಯ ಗೊಂದಲಿಗರ ಕಥೆಗಳು’ ಎಂಬ ಸಂಕಲನವೂ, ಕಾರಣವಾಗಿದ್ದುವು. ‘ಗೊಂದಲಿಗರ : ಒಂದು ಅಧ್ಯಯನ’ ಎಂಬ ಈ ಕೃತಿಯು ಆ ಸಂಪ್ರದಾಯದ ಬಗ್ಗೆ ಪ್ರಕಟವಾದ ಮೊಟ್ಟಮೊದಲ ಸಂಶೋಧನಾ ಉ್ಪ್ರಂಥ.


2. ಜನಪದ ನಿಘಂಟು (1987ರಲ್ಲಿ)


ಶಿಷ್ಟ ಪದಗಳಿಗೆ ಹಲವು ನಿಘಂಟುಗಳಿವೆ. ಆದರೆ ಜನಪದ ಶಬ್ದಗಳಿಗೆ ನಿಘಂಟು ಇರಲಿಲ್ಲ. ಜನಪದ ಸಾಹಿತ್ಯ ಸಂಕಲನಗಳ ಕೊನೆಯಲ್ಲಿ ಆಯಾ ಸಂಕಲನಗಳ ಕೆಲವು ಶಬ್ದಗಳಿಗೆ ಅರ್ಥ ಇರುತ್ತಿತ್ತಷ್ಟೆ. ಜನಪದ ಶಬ್ದಗಳಿಗೆಂದೇ ಪ್ರತ್ಯೇಕ ನಿಘಂಟು ಇರಲಿಲ್ಲ. ಈ ಕೊರತೆಯನ್ನು ನೀಗಿಸುವ ಸಲುವಾಗಿ ಡಾ. ರಾಗೌ ಹಾಗೂ ಪ್ರೊ. ಶಿವರಾಮು ಕಾಡನಕುಪ್ಪೆ ಅವರುಗಳ ಮಾರ್ಗದರ್ಶನದಲ್ಲಿ ಕ್ಯಾತನಹಳ್ಳಿ ರಾಮಣ್ಣ ಈ ನಿಘಂಟುವನ್ನು ರೂಪಿಸಿದರು. ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ ಅಂಕಣದಲ್ಲಿ ಡಾ. ಹಾ.ಮಾ. ನಾಯಕ ಅವರು, ಆ ವರ್ಷದ ಮೊದಲ ಹತ್ತು ಉತ್ತಮ ಗ್ರಂಥಗಳಲ್ಲಿ ಇದೂ ಒಂದು ಎಂದು ಪ್ರಶಂಸಿಸಿದ್ದರು. ಡಾ.ಎಸ್.ಕೆ. ಕರೀಂಖಾನ್ ಅವರಿಂದ ಬಿಡುಗಡೆಯಾಗಿ ಅವರ ಕೈಯಿಂದಲೇ ಬಹುಮಾನ ಸ್ವೀಕರಿಸಿದ್ದು ಒಂದು ಆಕಸ್ಮಿಕ.


3. ಕ್ಷೇತ್ರಕಾರ್ಯದ ಹಾದಿಯಲ್ಲಿ (1997ರಲ್ಲಿ)


ಮೂವತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಕ್ಷೇತ್ರಕಾರ್ಯ ನಡೆಸಿದ ಅನುಭವವಿರುವ ಕ್ಯಾತನಹಳ್ಳಿ ರಾಮಣ್ಣ ಬರೆದ ಒಂದು ಅಪೂರ್ವ ಕೃತಿ ಇದು. ಈ ಕೃತಿಯು ಮೂರು ಭಾಗಗಳಲ್ಲಿ ವಿಂಗಡಿಸಲ್ಪಟ್ಟಿದೆ. ಹಳ್ಳಿಯಿಂದ ಹಳ್ಳಿಗೆ, ಹೊಸ ಶೋಧಗಳು, ಕ್ಷೇತ್ರಕಾರ್ಯ.


ಭಾಗ-1 ಹಳ್ಳಿಯಿಂದ ಹಳ್ಳಿಗೆ:


ಈ ಭಾಗದಲ್ಲಿ ಹನ್ನೆರಡು ಅಧ್ಯಾಯಗಳಿವೆ. ಲೇಖಕರು ಇವುಗಳಲ್ಲಿ ಕೆಲವು ವಿಶಿಷ್ಟ ಅನುಭವಗಳನ್ನು ಚಿತ್ರಿಸಿದ್ದಾರೆ. ಕ್ಷೇತ್ರಕಾರ್ಯದಲ್ಲಿ ವಿಫಲವಾದ ಸಂದರ್ಭಗಳು ಕೂಡ ನಿರ್ಲಕ್ಷಿಸಲ್ಪಡದೆ ರಸವತ್ತಾಗಿ ಚಿತ್ರಿಸಲ್ಪಟ್ಟಿರುವುದು ಈ ಭಾಗದ ವೈಶಿಷ್ಟ್ಯ. ‘ಭಿಕ್ಷುಕರ ಬೆನ್ನುಹತ್ತಿ’ ಎಂಬ ಅಧ್ಯಾಯವಂತೂ ಹಲವು ವಿದ್ವಾಂಸರ ಮೆಚ್ಚುಗೆ ಗಳಿಸಿದೆ. ‘ಹಳ್ಳಿಯಿಂದ ಹಳ್ಳಿಗೆ’ ಈ ಭಾಗವು ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ ಎಂಬ ಅಭಿಪ್ರಾಯವನ್ನು ಕಥೆಗಾರ ವೀರಭದ್ರ ಅವರೂ ಪ್ರೊ. ಎಂ.ಎಂ. ಕಲಬುರ್ಗಿ ಅವರೂ, ವ್ಯಕ್ತಪಡಿಸಿದ್ದಾರೆ.


ಭಾಗ – 2 ಹೊಸ ಶೋಧಗಳು


ಈ ಭಾಗದಲ್ಲಿ ಇರುವ ಮೂರು ಅಧ್ಯಾಯಗಳೆಂದರೆ, 1. ಗೊಂದಲಗರು 2. ಭೂತೇರು 3. ಬಾಳಸಂತೋಷರು ಉತ್ತರ ಕರ್ನಾಟಕದಲ್ಲಿ ಕಂಡುಬರುವ ಈ ಮೂರು ಬಗೆಯ ವೃತ್ತಿಗಾಯಕರನ್ನು ಕನ್ನಡ ಜಾನಪದ ಲೋಕಕ್ಕೆ ಮೊಟ್ಟಮೊದಲು ಪರಿಚಯಿಸಿದವರು ಈ ಲೇಖಕರು. ಗೊಂದಲಿಗರ ಬಗ್ಗೆ ನಡೆಸಿದ ಅಧ್ಯಯನವನ್ನು ಡಾಕ್ಟರೇಟ್ ಪದವಿಗಾಗಿ ಯಾಕೆ ಸಲ್ಲಿಸಲಿಲ್ಲ ಎಂಬ ಪ್ರಶ್ನೆ ವಿಮರ್ಶಕರಾದ ಡಾ. ಗಿರಡ್ಡಿ ಗೋವಿಂದರಾಜ ಅವರದು. ದಕ್ಷಿಣ ಕರ್ನಾಟಕದಲ್ಲಿ ಡಾ. ಜೀಶಂಪ ಅವರು ಮಾಡಿದ ಕೆಲಸವನ್ನು ಕ್ಯಾತನಹಳ್ಳಿ ರಾಮಣ್ಣ ಉತ್ತರ ಕರ್ನಾಟಕದಲ್ಲಿ ಮಾಡಿದಂತಾಗಿದೆ ಎಂಬ ಅಭಿಪ್ರಾಯವು ಜಾನಪದ ಕ್ಷೇತ್ರದಲ್ಲಿದೆ.


ಭಾಗ – 3 ಕ್ಷೇತ್ರಕಾರ್ಯ:


ಈ ಭಾಗವು ಗ್ರಂಥಕ್ಕೆ ಕಿರೀಟಪ್ರಾಯವಾಗಿದೆ ಎಂಬುದಾಗಿ ಡಾ. ಎಂ.ಎಂ. ಕಲಬುರ್ಗಿ ಅವರು ಅಭಿಪ್ರಾಯಪಟ್ಟಿದ್ದಾರೆ.


ಇದು ಜಾನಪದ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಭಾಗವಾಗಿರುವ್ಯದರಿಂದ ಪ್ರತ್ಯೇಕ ಪುಸ್ತಕವಾಗಿ ಎರಡು ಸಲ ಪ್ರಕಟವಾಗಿದೆ. ಇದರಲ್ಲಿ ಕ್ಷೇತ್ರಕಾರ್ಯದ ಎಲ್ಲ ಮುಖಗಳ ಬಗ್ಗೆಯೂ ಚರ್ಚಿಸಲಾಗಿದೆ.


ಮೂರು ಭಾಗಗಳನ್ನುಳ್ಳ ಸಮಗ್ರ ಗ್ರಂಥವು 2006ರಲ್ಲಿ ಎರಡನೆಯ ಮುದ್ರಣ ಕಂಡಿದ್ದು, ಈ ಮುದ್ರಣದಲ್ಲಿ ಡಾ. ಎಂ.ಎಂ. ಕಲಬುರ್ಗಿ, ಡಾ. ಗಿರಡ್ಡಿ ಗೋವಿಂದರಾಜ, ಡಾ.ಕೆ.ಎಸ್. ಭಗವಾನ್, ಪ್ರೊ. ಡಿ. ಲಿಂಗಯ್ಯ, ಡಾ. ವೀರಣ್ಣ ದಂಡೆ, ಡಾ. ಕೆ. ಅನಂತರಾಮು ಮುಂತಾದವರ ಅಭಿಪ್ರಾಯಗಳೂ ಕೆಲವು ಪತ್ರಿಕಾ ವಿಮರ್ಶೆಗಳೂ ಅಚ್ಚಾಗಿವೆ. ಇದು 2012ರಲ್ಲಿ ಮೂರನೆಯ ಮುದ್ರಣ ಕಂಡಿದೆ.


4. ಹಲಗಲಿಯ ಬೇಡರು (1988ರಲ್ಲಿ)


ನೂರಾ ಇಪ್ಪತ್ತೇಳು ವರ್ಷಗಳ ಹಿಂದೆ ಜಾನ್ ಫೆಯ್ತ್‍ಫುಲ್ ಫ್ಲೀಟ್ ಅವರಿಂದ ಸಂಗ್ರಹಿತವಾದ ಐತಿಹಾಸಿದ ಲಾವಣಿಗಳಲ್ರ್ಲೆಂದಾದ ‘ದಿ ಬೇಡಾಸ್ ಆಫ್ ಹಲಗಲಿ’ ಎಂಬ ಲಾವಣಿಯನ್ನು ಆಧಾರವಾಗಿಟ್ಟುಕೊಂಡು ರಚಿಸಲ್ಪಟ್ಟ ನಾಟಕ. ಈ ಕೃತಿಯ ವಸ್ತು ಜಾನಪದ ಮೂಲದ್ದಾದರೂ ಸೃಜನಶೀಲ ಅಂಶಗಳು ಅಧಿಕವಾಗಿದ್ದುದರಿಂದ ಇದೊಂದು ಸೃಜನಶೀಲ ಕೃತಿಯೆಂದು ಪರಿಗಣಿತವಾಗಿ, ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಆ ವರ್ಷದ ಅತ್ಯುತ್ತಮ ನಾಟಕವೆಂದು ಪುರಸ್ಕøತವಾಗಿದೆ.


1885ರಲ್ಲಿ ನಡೆದ ಸಿಪಾಯಿದಂಗೆ ಬಿಸಿಯಿಂದ ಎಚ್ಚೆತ್ತುಕೊಂಡ ಬ್ರಿಟಿಷ್ ಸರ್ಕಾರವು ಅದೇ ವರ್ಷ ನಿರಾಯುಧ ಕಾಯಿದೆಯನ್ನು ಜಾರಿಗೆ ತಂದಿತು. ಪ್ರಜೆಗಳು ತಮ್ಮಲ್ಲಿರುವ ಆಯುಧಗಳನ್ನೆಲ್ಲ ಸರ್ಕಾರಕ್ಕೆ ಒಪ್ಪಿಸಬೇಕು, ಆಯುಧದ ಅಗತ್ಯ ಇರುವವರು ನಿಗದಿತ ಶುಲ್ಕ ನೀಡಿ ಪರವಾನಗಿ ಪಡೆದುಕೊಳ್ಳಬೇಕು. ಇದು ಆ ಕಾಯ್ದೆಯ ತಿರುಳಾಗಿತ್ತು. ಆಯುಧಗಳಿಂದ ಬೇಟೆಯಾಡಿ ಬದುಕನ್ನು ಸಾಗಿಸುತ್ತಿದ್ದ ಬೇಡರು ಈ ಕಾಯ್ದೆಯಿಂದ ಕಂಗಾಲಾದರು. ಆಯುಧಗಳನ್ನೆಲ್ಲ ಸರ್ಕಾರಕ್ಕೆ ಒಪ್ಪಿಸಿ ಜೀವಿಸುವುದಾದರೂ ಹೇಗೆ? ಈ ಪ್ರಶ್ನೆಗೆ ಉತ್ತರವಾಗಿ ಬೇಡರು ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆಯೆದ್ದರು. ಆಯುಧಗಳನ್ನು ವಶಪಡಿಸಿಕೊಳ್ಳಲು ಬಂದ ಬ್ರಿಟಿಷ್ ಸೈನ್ಯವನ್ನು ಹಿಮ್ಮೆಟ್ಟಿಸಿದರು. ಬೇಡರನ್ನು ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಹತಾಶರಾದ ಬ್ರಿಟಿಷರು ರಾತ್ರೋರಾತ್ರಿ ಹಲಗಲಿ ಎಂಬ ಹಳ್ಳಿಗೆ ಬೆಂಕಿಯಿಟ್ಟು ಸುಟ್ಟುಬಿಟ್ಟರು. ಇದು ‘ಹಲಗಲಿಯ ಬೇಡರು’ ನಾಟಕದ ವಸ್ತು.


ಈ ನಾಟಕವು ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ಪಡೆದುದಲ್ಲದೆ ಮೈಸೂರು ವಿಶ್ವವಿದ್ಯಾನಿಲಯ ಬಿ.ಎ. ತರಗತಿಗೆ ವಿಸ್ತøತ ಪಠ್ಯಪುಸ್ತಕವಾಗಿಯೂ ನೇಮಕವಾಗಿತ್ತು.


ಕನ್ನಡ ಜಾನಪದ ನಿಘಂಟು


‘ಜನಪದ ನಿಘಂಟು’ ಕೃತಿಯು ಕನ್ನಡದಲ್ಲಿ ಮೊಟ್ಟಮೊದಲ ಜಾನಪದ ನಿಘಂಟುವಾಗಿದೆ. ಇದು ಪ್ರಕಟವಾದದ್ದು 1987ರಲ್ಲಿ. ಅಲ್ಲಿಂದೀಚೆಗೆ ಅನೇಕರು ನಿಘಂಟುಗಳನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಂದಿಗೆ ಕನ್ನಡ ಜಾನಪದ ಅಕಾಡೆಮಿಯು ಹಮ್ಮಿಕೊಂಡಿದ್ದ ‘ಜಾನಪದ ನಿಘಂಟು’ ಯೋಜನೆಯಲ್ಲಿ ಸಂಪಾದಕನಾಗಿ ಕೆಲಸ ಮಾಡಿ ಸದರಿ ನಿಘಂಟುವಿನ ಮೂರು ಸಂಪುಟಗಳು ನಿಗದಿತ ಕಾಲದ ಅವಧಿಗಿಂತ ಮೊದಲೇ ಪ್ರಕಟವಾಗಲು ಕ್ಯಾತನಹಳ್ಳಿ ರಾಮಣ್ಣ ಶ್ರಮಿಸಿದ್ದಾರೆ.


ಪಠ್ಯಪುಸ್ತಕಗಳಾಗಿ


ಫ್ಲೀಟರು ಸಂಗ್ರಹಿಸಿದ ಐದು ಐತಿಹಾಸಿಕ ಲಾವಣಿಗಳು, ಹಲಗಲಿಯ ಬೇಡರು, ಕಬ್ಬಾಳು ಕುಳಿಯಲ್ಲಿ ಹುಲಿ, ಬೀದರ ಜಿಲ್ಲೆಯ ಜನಪದ ಗೀತೆಗಳು – ಈ ಮುಂತಾದ ಕೃತಿಗಳು, ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಶ್ವವಿದ್ಯಾನಿಲಯ, ಗುಲ್ಬರ್ಗ ವಿಶ್ವವಿದ್ಯಾನಿಲಯ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳಲ್ಲಿ ಹಲವಾರು ವರ್ಷಗಳಿಂದ ಒಂದಲ್ಲ ಒಂದು ಕಡೆ, ಒಂದಲ್ಲ ಒಂದು ಕೃತಿಯು, ಪಠ್ಯಪುಸ್ತಕವಾಗಿ ಇದುವರೆವಿಗೂ ಸತತವಾಗಿ ನಿಯಮಿಸಲ್ಪಡುತ್ತಿದೆ.


ವಿಚಾರ ಸಂಕಿರಣಗಳು


ಮೈಸೂರು, ಬೆಂಗಳೂರು, ಕುವೆಂಪು ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯಗಳು ಏರ್ಪಡಿಸಿದ್ದ ಹಲವು ವಿಚಾರ ಸಂಕಿರಣಗಲ್ಲಿ ಭಾಗವಹಿಸಿ ಜಾನಪದದ ವಿವಿಧ ಆಯಾಮಗಳ ಬಗ್ಗೆ ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದಾರೆ. ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.


ಇವರ ಸಾಹಿತ್ಯವನ್ನು ಕುರಿತು 2000 ನವೆಂಬರ್‍ನಲ್ಲಿ ಇಡೀ ದಿನ ಪೂರ್ಣ ಪ್ರಮಾಣದ ವಿಚಾರ ಸಂಕಿರಣವು ಪಾಂಡವಪುರದಲ್ಲಿ ನಡೆಯಿತು. ಇವರ ಸಾಹಿತ್ಯವನ್ನು ಆಸಕ್ತರೊಬ್ಬರು ಪಿಎಚ್.ಡಿ ಗಾಗಿ ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸುತ್ತಿದ್ದಾರೆ.


ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಇವರಿಗೆ ಹಲವು ಸಲ ಸನ್ಮಾನಗಳು ಲಭ್ಯವಾಗಿವೆ. ಹುಟ್ಟಿದ ಊರಿನಲ್ಲಿ ಕೂಡ ಸನ್ಮಾನ ಮಾಡಲಾಗಿದೆ.

No comments:

Post a Comment